Sunday 5 November 2017

ಮಿಜಾರು ಶ್ರೀ ಕೊಡಮಣಿತ್ತಾಯ ದೈವದ ಮರದ ಅಣಿಯ ಕಥೆ

" ಮಿಜಾರು ಶ್ರೀಕೊಡಮಣಿತ್ತಾಯ ದೈವದ ಮರದ ಅಣಿಯ ಕಥೆ.."

ತುಳುನಾಡಿನ ದೈವಗಳಿಗೆ ಹೆಚ್ಚಾಗಿ ನೇಮದಲ್ಲಿ ಅಣಿ ಕಟ್ಟುವ ಸಂಪ್ರದಾಯವಿದೆ.ಆ ಅಣಿಯನ್ನು ಹೆಚ್ಚಾಗಿ ತೆಂಗಿನ ಸಿರಿ, ಕಂಗಿನ ಹಾಳೆಯಿಂದ ತಯಾರಿಸಿದರೆ ಈಗ ಕಂಚು, ಬೆಳ್ಳಿ, ಬಂಗಾರದ ಅಣಿಯನ್ನು ದೈವಗಳ ನೇಮದಲ್ಲಿ ಉಪಯೋಗಿಸುತ್ತಾರೆ.

ಆದರೆ ಮಿಜಾರು ಇರ್ಂದಾಲ ಪಟ್ಟದಲ್ಲಿ ರಾಜವೈಭವದಲ್ಲಿ ಮೆರೆಯುವ ಧರ್ಮದೈವ ಶ್ರೀಕೊಡಮಣಿತ್ತಾಯನ ನೇಮದಲ್ಲಿ ಅಣಿಗೆ ತನ್ನದೇ ಆದ ಇತಿಹಾಸ, ನಂಬಿಕೆ ಇದೆ.

ಈ ಅಣಿಯ ಹಿಂದೆ ಒಂದು ಕತೆಯಿದೆ. ಏನೆಂದರೆ, ಅಂದು ಮಿಜಾರು ಗುತ್ತಿನ ಸುಬ್ಬಯ್ಯ ಬಂಡ್ರಿಯಾಲ್ ಅವರ ಕಾಲದಲ್ಲಿ ಮಿಜಾರು ರಾಜ್ಯಕ್ಕೆ ಶ್ರೀಕೊಡಮಣಿತ್ತಾಯ ದೈವವು ಪ್ರವೇಶಿಸುವ ಕಾಲದಲ್ಲಿ ಭಾರೀ ಬಡತನದ ಸಮಯ, ತಿನ್ನುವ ಅನ್ನಕ್ಕೇ ಸಂಕಷ್ಟ ಒದಗಿದ ಕಾಲ ಅದೇ ಸಮಯದಲ್ಲಿ ಆಗಿನ ಮಿಜಾರು ಇರ್ಂದಾಲಿನ ಅಧಿಕಾರಿ ಸಾರತ್ತ ಮಲ್ಲ ತೆನ್ಕಾಯಿಯ ಮಲಿಯಾಳಿ ಅರಸು ತನ್ನ ಕಪ್ಪ ಕಾಣಿಕೆ ವಸೂಲಿ ಮಾಡಲು ಬರುವ ಹೊತ್ತು.ತಿನ್ನುವ ಅನ್ನಕ್ಕೆ ಸಂಕಷ್ಟ ಒದಗಿದ ಕಾಲದಲ್ಲಿ ಅರಸನಿಗೆ ಕಪ್ಪ ನೀಡುವುದು ಹೇಗೆಂದು ಗುತ್ತಿನ ಅಧಿಕಾರಿ ಸುಬ್ಬಯ್ಯ ಬಂಡ್ರಿಯಾಲ್ ಚಿಂತಾಕ್ರಾಂತರಾಗಿದ್ದರು.

ಅದೇ ಸಮಯದಲ್ಲಿ ಪೆರಿಂಜೆಯ ಗ್ರಾಮದಲ್ಲಿ ದೈವ ಶ್ರೀಕೊಡಮಣಿತ್ತಾಯನನ್ನು ನಂಬಿ ಆ ಗ್ರಾಮಕ್ಕೆ ಬಂದ ಸಂಕಷ್ಟ ಪರಿಹಾರ ಆದ ವಿಷಯವನ್ನು ಕೇಳಿ ತಿಳಿದುಕೊಂಡಿದ್ದ ಸುಬ್ಬಯ್ಯ ಬಂಡ್ರಿಯಾಲ್ ರವರು ಅಂತಹ ದೈವವು ತನ್ನ ರಾಜ್ಯಕ್ಕೆ ಬಂದರೆ ತನ್ನ ಸಂಕಷ್ಟವೂ ಪರಿಹಾರವಾದೀತು ಎಂದು. ಗ್ರಾಮದ ಮೂಡುಕರೆಯ ಕುಕ್ಕಿಕಟ್ಟೆಯ ಸ್ಥಳದಲ್ಲಿ ಆಲೋಚಣೆ ಮಾಡುತ್ತಿರುವಾಗ ಅವರ ಭಕ್ತಿಗೆ ಮೆಚ್ಚಿ ದೈವ ಶ್ರೀಕೊಡಮಣಿತ್ತಾಯನು ಆದಿಪೆರಿಂಜದಿಂದ ಮಿಜಾರು ಗ್ರಾಮಕ್ಕೆ ಪ್ರವೇಶಿಸುತ್ತಾನೆ.

ಮಾಯ ಸ್ವರೂಪಿಯಾಗಿ ಬಂದ ಶ್ರೀಕೊಡಮಣಿತ್ತಾಯನನ್ನು ಮಿಜಾರು ಗುತ್ತಿನ ಧರ್ಮಚಾವಡಿಯಲ್ಲಿ ಪಟ್ಟ ಸಿಂಹಾಸನದಲ್ಲಿ ಆರಾಧಿಸಿದ ಸುಬ್ಬಯ್ಯ ಬಂಡ್ರಿಯಾಲ್'ರವರು ದೈವಕ್ಕೆ ಚಾವಡಿ ನೇಮ ಕೊಡಬೇಕೆಂದು ಚಿಂತನೆ ಮಾಡುವಾಗ ಈ ಬಡತನ ಹೊತ್ತಿನಲ್ಲಿ ನೇಮ ನಡೆಸುವುದು ಹೇಗೆಂದು ಚಿಂತಾಕ್ರಾಂತರಾಗುತ್ತಾರೆ.

ಆ ಸಮಯದಲ್ಲಿ ಮಾಯೆಯಲ್ಲಿ ಮಾಯಾ ನುಡಿಯನ್ನು ನೀಡಿದ ಧರ್ಮದೈವ ಶ್ರೀಕೊಡಮಣಿತ್ತಾಯನು "ಸುಬ್ಬಯ್ಯ ಬಂಡ್ರಿಯಾಲೆ ನನಗೆ ನಿಮ್ಮ ಜೋಗದ ನೇಮ ಬೇಡ ಮಾಯದ ನೇಮವನ್ನು ನೀವು ನೀಡುವ ವಸ್ತು ಮುಖೇನ ಮಾಯದಲ್ಲಿ ಸ್ವೀಕರಿಸುತ್ತೇನೆ" ಎಂದು ಮಾಯೆಯಲ್ಲಿ ನುಡಿಯುತ್ತಾನೆ. ಈ ಪ್ರಕಾರವಾಗಿ ವಿವಿಧ ರೀತಿಯಲ್ಲಿ ಸುಬ್ಬಯ್ಯ ಬಂಡ್ರಿಯಾಲ್ ರವರ ಭಕ್ತಿಯನ್ನು ಧರ್ಮದೈವ ಪರೀಕ್ಷಿಸುತ್ತಾನೆ.

ಹೀಗೆ ತನಗೆ ನೇಮ ಬೇಡವೆಂದ ಧರ್ಮದೈವವು ನನ್ನ ಚಾವಡಿಗೆ ನೇಮದ ಸಮಯದಲ್ಲಿ ಹಾಕುವ ಕೊಡಿಬಟ್ಟೆಯನ್ನು ಹಾಕೆಂದು ಆದೇಶಿಸುತ್ತಾನೆ. ದೈವ ಭಕ್ತ ಸುಬ್ಬಯ್ಯ ಬಂಡ್ರಿಯಾಲರು ತನ್ನ ತಲೆಗೆ ಕಟ್ಟಿದ್ದ ಹದಿನಾರು ಮೊಳ ಉದ್ದದ ತರೆತ್ರದ (ಮುಂಡಾಸ್) ಬಟ್ಟೆಯನ್ನೇ ಕತ್ತರಿಸಿ ಅದರ ಅರ್ಧಭಾಗದಲ್ಲಿ ಚಾವಡಿಗೆ ಕೊಡಿ ಹಾಕಿಸುತ್ತಾರೆ.

ಆ ನಂತರ ಧರ್ಮದೈವವು ನೇಮದಲ್ಲಿ ನನಗೆ ಕಟ್ಟುವ ಅಣಿಯನ್ನು ತಯಾರಿಸಿ ಕೊಡೆಂದು ಆದೇಶಿಸುತ್ತಾನೆ. ಬಡತನದ ಸಮಯ ತೆಂಗಿನಲ್ಲಿ ಸಿರಿಯಿಲ್ಲ,ಕಂಗಿನಲ್ಲಿ ಹಾಳೆಯಿಲ್ಲ ಈ ಹೊತ್ತಿನಲ್ಲಿ ಅಣಿಯನ್ನು ಹೇಗೆ ತಯಾರಿಸುವುದೆಂದು ಯೋಚನಾ ಮಗ್ನರಾದಗ ಪುನರಪಿ ಧರ್ಮದೈವ ಶ್ರೀಕೊಡಮಣಿತ್ತಾಯನು "ಸುಬ್ಬಯ್ಯ ಬಂಡ್ರಿಯಾಲೆ ನಿನ್ನ ಮನೆ ಮುಂಭಾಗದ ಬಾಕಿಮಾರು ಗದ್ದೆಯ ತುದಿಯಂಚಿನಲ್ಲಿರುವ ವರ್ಷದ ಹನ್ನೆರಡೂ ತಿಂಗಳೂ ಬಲ ಭಾಗದಲ್ಲಿ ತುಳುವೆ ಹಲಸು,ಎಡ ಭಾಗದಲ್ಲಿ ಬರ್ಕೆ ಹಲಸನ್ನು ನೀಡುವ ಆ ಹಲಸಿನ ಮರವನ್ನೇ ಕಡಿದು ನನಗೆ ಆ ಮರದಿಂದ ನನಗೆ ಮರದ ಅಣಿಯನ್ನು ನಿರ್ಮಿಸಿಕೊಡು ಎಂದು ಹೇಳುತ್ತಾನೆ.

ತನ್ನ ತುಂಬು ಕುಟುಂಬದ ಹಸಿವನ್ನು ನೀಗಲು ಈ ಸಂಕಷ್ಟದ ಸಮಯದಲ್ಲಿ ಕೊನೆಗೆ ಉಳಿದಿದ್ದ ಆ ಮರವನ್ನು ಕಡಿದರೆ ಇನ್ನು ನನ್ನ ಕುಟುಂಬದ ಗತಿಯೇನು ? ಎಂದು ಒಂದು ನಿಮಿಷವೂ ಚಿಂತಿಸದ ದೈವಭಕ್ತ ಸುಬ್ಬಯ್ಯ ಬಂಡ್ರಿಯಾಲರು ದೈವದ ಅಪ್ಪಣೆಯಂತೆ ಮರವನ್ನು ಕಡಿಸಿ ಶಿಲ್ಪಿ ಮುಖೇನವಾಗಿ ದೈವಕ್ಕೆ ಮರದ ಅಣಿಯನ್ನು ನಿರ್ಮಿಸಿ ಹಾಗೂ ಜಕ್ಕೆಲಣಿಗೆ ತನ್ನ ತರೆತ್ರದ ಉಳಿದ ಬಟ್ಟೆಯನ್ನು ನೀಡಿ ಮರದ ಅಣಿ ಹಾಗೂ ಜಕ್ಕೆಲಣಿಯನ್ನು ಧರ್ಮದೈವ ಶ್ರೀಕೊಡಮಣಿತ್ತಾಯನಿಗೆ ಅರ್ಪಿಸುತ್ತಾರೆ.ಮುಂದೆ ಹಾಲು ನೀಡುವ ದನ ಇಲ್ಲದಾಗ ದನದ ಹಾಲಿನ ಬದಲಾಗಿ ತೆಂಗಿನ ಕಾಯಿಯ ಹಾಲನ್ನು ಅರ್ಪಿಸಿ ದೈವಕ್ಕೆ ಮಾಯದ ನೇಮವನ್ನು ದೈವ ನುಡಿ ಪ್ರಕಾರ ಸಮರ್ಪಿಸುತ್ತಾರೆ.

ತನ್ನ ಮಾನ-ಪ್ರಾಣ ಎರಡೂ ಶ್ರೀಕೊಡಮಣಿತ್ತಾಯನಿಗೆ ಅರ್ಪಿತ ನನ್ನ ಹಾಗೂ ನನ್ನ ನಾಲನ್ನಾಯ ಬಳಿಯ ಕುಲರಕ್ಷಕ ಅವನೇ ಎಂದು ಪರಿಪೂರ್ಣವಾಗಿ ಧರ್ಮದೈವಕ್ಕೆ ಶರಣಾಗುತ್ತಾರೆ. ಮುಂದೆ ಧರ್ಮದೈವ ಶ್ರೀಕೊಡಮಣಿತ್ತಾಯನು ಮಿಜಾರು ಗುತ್ತಿನ ಸುಬ್ಬಯ್ಯ ಬಂಡ್ರಿಯಾಲ್ ರವರ ಭಕ್ತಿಗೆ ಮೆಚ್ಚಿ ಅವರ ಬಡತನವನ್ನು ಕಳೆದು ಸಿರಿವಂತಿಕೆಯನ್ನು ಕೊಟ್ಟು. ಕೇರಳ ತೆಂಕಣದ ಮಲಿಯಾಳಿ ಅರಸನಿಂದ (ಸಾರತ್ತ ಮಲ್ಲ ತೆನ್ಕಾಯಿ ಮಲಿಯಾಳಿ ಅರಸು) ೪೮ ಕೋರ್ಜಿಯ ಭೂಮಿಯನ್ನು ಉತ್ತುರುಂಬಳಿ ತೆಗಿಸಿಕೊಟ್ಟನು.

ಹೀಗೆ ಅಂದು ಸುಬ್ಬಯ್ಯ ಬಂಡ್ರಿಯಾಲರು ಚಾವಡಿಯಲ್ಲಿ ಹಾಕಿಸಿದ ಕೊಡಿಬಟ್ಟೆಯ ನೆನಪಿಗಾಗಿ ಮಿಜಾರು ಗುತ್ತಿನ ಧರ್ಮಚಾವಡಿಯಲ್ಲಿ ವರ್ಷದ ಹನ್ನೆರಡೂ ತಿಂಗಳೂ ಕೊಡಿಬಟ್ಟೆ ತೆಗಿಯುವ ಸಂಪ್ರದಾಯ. (ಇದು ದೈವಕ್ಕೆ ನಿತ್ಯ ಮಾಯಾದಾಯನ / ಮಾಯದ ನೇಮ ಎಂಬುದು ದೈವ ಮಿಜಾರು ಶ್ರೀಕೊಡಮಣಿತ್ತಾಯನ ನುಡಿ) ಅವರು ನಿರ್ಮಿಸಿದ ಮರದ ಅಣಿಯೂ ಈಗಲೂ ಶ್ರೀಕ್ಷೇತ್ರ ಮಿಜಾರಿನಲ್ಲಿದೆ. ಹಾಗೂ ಮಿಜಾರು ಶ್ರೀಕೊಡಮಣಿತ್ತಾಯನಿಗೆ ದನದ ಹಾಲಿನ ಬದಲಾಗಿ ತೆಂಗಿನಹಾಲನ್ನು ನೀಡುವ ಸಂಪ್ರದಾಯ ಆ ಕಾಲದಿಂದಲೂ ಶ್ರೀಕ್ಷೇತ್ರದಲ್ಲಿ ಸಂಪ್ರದಾಯ ಬದ್ಧವಾಗಿ ನಡೆಯುತ್ತಿದೆ.

ಹೀಗೆ ಅಂದು ಆ ಬಡತನದ ಹೊತ್ತಿನಲ್ಲೂ ತನ್ನ ಭಕ್ತಿಯಲ್ಲಿ ಬಡತನ ತೋರದ ಮಿಜಾರು ಗುತ್ತಿನ ಸುಬ್ಬಯ್ಯ ಬಂಡ್ರಿಯಾಲರ ಭಕ್ತಿ, ನಂಬಿಕೆಯ ದ್ಯೋತಕವಾಗಿ ಮಿಜಾರು ಶ್ರೀಕೊಡಮಣಿತ್ತಾಯ ದೈವಕ್ಕೆ ತಮ್ಮ ಜೀವನಾಧಾರಕ್ಕೆ ಸಹಕಾರಿಯಾಗಿದ್ದ ವರ್ಷಪೂರ್ತಿ ಫಲ ನೀಡುವ ಹಲಸಿನ ಮರವನ್ನೇ ಅರ್ಪಿಸಿ ತನ್ನ ಮಾನ-ಪ್ರಾಣವನ್ನು ಬದಿಗೊತ್ತಿ ತ್ಯಾಗದ ಭಕ್ತಿಮಾರ್ಗದಲ್ಲಿ ಆ ದೈವಭಕ್ತ ಮಾಡಿದ ಕಟ್ಟಳೆಗಳನ್ನು ಮಿಜಾರು ಗ್ರಾಮದಲ್ಲಿ ಸುಬ್ಬಯ್ಯ ಬಂಡ್ರಿಯಾಲ್ ಕಾಲದಲ್ಲಿ ಮಾಡಿದ ಕಟ್ಟಳೆ ಎಂದು ಹೇಳುತ್ತಾರೆ.

ಮಿಜಾರು ಗುತ್ತಿನ ಬಾಕಿಮಾರು ಗದ್ದೆಯಲ್ಲಿ ಈಗಲೂ ಆ ಪುಣ್ಯ ಪುರುಷ, ಮಹಾನ್ ದೈವ ಭಕ್ತ, ಮಿಜಾರು ಗುತ್ತಿನ ಪ್ರಥಮದ ಪಟ್ಟದ ಗಡಿಕಾರ ಶ್ರೀಸುಬ್ಬಯ್ಯ ಬಂಡ್ರಿಯಾಲರ ಮೂಲ ಸಮಾಧಿ ಗಾಳಿ,ಮಳೆ, ಬಿಸಿಲಿಗೆ ಕಿಂಚಿತ್ತೂ ಕಳಾಹೀನವಾಗದೆ ಪ್ರಕೃತಿಯ ರಕ್ಷಣೆಯಲ್ಲಿ ಮೂಲಸ್ಥಿತಿಯಲ್ಲೇ ಮೆರೆಯುತ್ತಿದೆ. (ಆ ಸಮಾಧಿಗೆ ಮಿಜಾರು ಶ್ರೀಕೊಡಮಣಿತ್ತಾಯ ದೈವದ ರಕ್ಷಣೆಯಿದೆ ಎಂಬುದು ಮಿಜಾರು ಗ್ರಾಮಸ್ಥರ ನಂಬಿಕೆ)

ತುಳುವರ ಪೂರ್ವ ಹಿರಿಯರಿಗೆ ಜೀವನದಲ್ಲಿ ಬಡತನದ ಛಾಯೆ ಇದ್ದರೂ ದೈವನಂಬಿಕೆಯಲ್ಲಿ ಅವರು ಬಡತನ ತೋರಿರಲಿಲ್ಲ. ಆ ಭಕ್ತಿ ನಂಬಿಕೆ ತ್ಯಾಗದ ಸತ್ವವೇ ಅವರ ಜೀವನಾಧಾರವಾಗಿತ್ತು. ಅವರ ಅಪರಿಮಿತ ಭಕ್ತಿಯ ಪ್ರೀತಿಗೆ ಮಾಯಶಕ್ತಿಗಳೂ ಸೋತು ಶರಣಾಗುತ್ತಿದ್ದವು. ಬಡತನ ಎಂಬುದು ಜೀವನ ನಿರ್ವಹಣೆಯಲ್ಲಿಯೇ ವಿನಃ ಭಕ್ತಿ ಭಾವ ನಂಬಿಕೆಯಲ್ಲಿ ಅಲ್ಲ ಎಂಬುದನ್ನು ಆ ಕಾಲದಲ್ಲಿಯೇ ಅವರು ಸಾರಿ ಹೇಳಿದ್ದರು. ಅಂದು ಅವರು ನಡೆದ ಭಕ್ತಿ, ನಂಬಿಕೆಯ ಮಾರ್ಗವೇ ಇಂದು ತುಳುವರ ಜೀವನಮೌಲ್ಯಕ್ಕೆ ರಾಜಮಾರ್ಗವಾಗಿದೆ.

✍ ಅಭಿಲಾಷ್-ಚೌಟ, ಕೊಡಿಪಾಡಿಬಾಳಿಕೆ ಸುರತ್ಕಲ್.
Courtesy : Beauty of Tulunad